ಬಳ್ಳಿಗಾವೆ
ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿ ಶಿರಾಳಕೊಪ್ಪಕ್ಕೆ ಎರಡು ಕಿ.ಮೀ. ದೂರದಲ್ಲಿರುವ ಒಂದು ಪುರಾತನ ಗ್ರಾಮ. ಬೆಳಗಾಮಿ ಇಂದಿನ ಹೆಸರು. ಜನಸಂಖ್ಯೆ 3,349 (2001). ಬೆಳಗಾಮಿ, ಬಳ್ಳಿಗಾಮೆ, ವಲ್ಲಿಗ್ರಾಮೆ, ಬಲಿರಾಜಧಾನಿ ಮುಂತಾದ ಹೆಸರುಗಳಿಂದ ಹಿಂದೆ ಇದು ಕರ್ನಾಟಕದಲ್ಲೇ ಅತ್ಯಂತ ಪ್ರಸಿದ್ಧವಾಗಿದ್ದ ನಗರಗಳಲ್ಲೊಂದಾಗಿತ್ತು, ಇಲ್ಲಿ ದೊರೆತಿರುವ ನೂರಿಪ್ಪತ್ತಕ್ಕೂ ಹೆಚ್ಚು ಶಾಸನಗಳು, ಅಳಿದುಳಿದ ದೇವಾಲಯಗಳು, ಇತರ ಕಟ್ಟಡಗಳ ಭಾಗಗಳು, ಎಲ್ಲೆಲ್ಲಿಯೂ ಹರಡಿರುವ ಶಿಲ್ಪಗಳು, ವಿಸ್ತಾರವಾಗಿ ಹಬ್ಬಿರುವ ಪ್ರಾಚೀನ ನಿವೇಶನದ ಅವಶೇಷಗಳು ಈ ನಗರದ ಒಂದು ಕಾಲದ ಸಮೃದ್ಧಿಯನ್ನೂ ವೈಭವವನ್ನೂ ನೆನಪುಮಾಡಿ ಕೊಡುತ್ತದೆ.

ಏಳನೆಯ ಶತಮಾನದಲ್ಲಿಯೇ ಇದು ವಳ್ಳಿರ್ಗಾಮೆ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದುದಾಗಿ ಶಾಸನವೊಂದರಿಂದ ತಿಳಿದುಬರುತ್ತದೆ. ಇಲ್ಲಿ ಪಾಂಡವರು ಪಂಚಲಿಂಗ ಪ್ರತಿಷ್ಠೆ ಮಾಡಿದುದಾಗಿಯೂ ಬಲಿಯ ರಾಜಧಾನಿಯಾಗಿದ್ದುದರಿಂದ ಇದಕ್ಕೆ ಬಲಿಪುರವೆಂಬ ಹೆಸರು ಬಂದುದಾಗಿಯೂ ಕೆಲವು ಶಾಸನಗಳು ತಿಳಿಸುತ್ತವೆ.

ಈ ಊರು ಅತ್ಯಂತ ಉಚ್ಛ್ರಾಯ ಸ್ಥಿತಿಗೆ ಬಂದುದು 11-12ನೆಯ ಶತಮಾನಗಳಲ್ಲಿ. ಇಲ್ಲಿಯ ಬಹುತೇಕ ಶಾಸನಗಳು ಈ ಕಾಲಕ್ಕೆ ಸೇರಿದುವು. ಸುಂದರವಾಗಿ ಕಂಡರಿಸಿರುವ ಈ ಶಾಸನಗಳನೇಕವು ಪ್ರೌಢವಾದ ಶೈಲಿಯಲ್ಲಿದ್ದು ಸಾಹಿತ್ಯಿಕ ಮೌಲ್ಯವನ್ನು ಪಡೆದಿದೆ. ಬಳ್ಳಿಗಾಮೆ ಸಜ್ಜನನಿಧಿ ಪಟ್ಟಣಂಗಳ ತವರ್ಮನೆಯಾಗಿತ್ತು. ಇದು ಅಮರಾವತಿಯಂತೆ ವಿಬುಧೈಕವಾಸವೂ ಭೋಗವತೀಪುರದಂತೆ ಅತಿಭೋಗಿಸೇವ್ಯವೂ ಅಲಕಾಪುರದಂತೆ ಧನದ ಪ್ರಸೇವ್ಯವೂ ಆಗಿತ್ತು. ಇಲ್ಲಿಯ ನಾಗರಿಕರು ಪರಹಿತರೇಕವಾಕ್ಯರರಿವಿಂಗೆ ತವರ್ಮನೆ, ಧರ್ಮದಾಗರಂ, ಸರಸಕವೀಶ್ವರಾಳಿಗೆ ಕೇಳೀಗೃಹಂ, ಹರಿಹರ ಕಮಳಾಸನ ವೀತರಾಗ ಬೌದ್ಧಾಲಯಗಳಿಂದ ಪಂಚಮಠಗಳಿಂದ ಕೂಡಿ ಸಕಲ ಸೌಂದರ್ಯಕ್ಕೂ ಸಕಲ ಧರ್ಮಕ್ಕೂ ತವರ್ಮನೆಯಾಗಿ ಬಳ್ಳಿಗಾವೆ ಶೋಭಿಸುತ್ತಿತ್ತು. ಇದು ಅನಾದಿ ಪಟ್ಟಣ, ಮಹಾಪಟ್ಟಣ ರಾಜಧಾನಿ ಎಂದೆಲ್ಲ ಹೊಗಳುತ್ತವೆ ಇಲ್ಲಿನ ಶಾಸನಗಳು. ಇಲ್ಲಿಯ ಮಠಗಳು ಪ್ರಸಿದ್ಧ ವಿದ್ಯಾಕೇಂದ್ರಗಳೂ ಆಗಿದ್ದುವು.

ಬನವಸೆ-12,000 ಪ್ರಾಂತ್ಯಕ್ಕೆ ರಾಜಧಾನಿಯಾಗಿದ್ದ ಬಳ್ಳಿಗಾವೆಯಿಂದ ಹನ್ನೊಂದನೆಯ ಶತಮಾನದ ಆದಿಯಿಂದಲೇ ಚಾಳುಕ್ಯರ ಸಾಮಂತರು ಆಳಿದರು. ತೈಲಪನ ಕಾಲದಲ್ಲಿ ಕುಂದಮರಸ ಆಳುತ್ತಿದ್ದರೆ, ಸೋಮೇಶ್ವರನ ಕಾಲದಲ್ಲಿ ಅವನ ಮಗ ವಿಕ್ರಮಾದಿತ್ಯ ತಾನು ಚಕ್ರವರ್ತಿಯಾಗುವುದಕ್ಕೆ ಮೊದಲು ಚಾಳುಕ್ಯ ಚಕ್ರಾಧಿಪತ್ಯದ ದಕ್ಷಿಣ ದೇಶಭಾಗವನ್ನೆಲ್ಲ ಇಲ್ಲಿಂದ ಆಳುತ್ತಿದ್ದ. ಕಳಚುರಿ ಬಿಜ್ಜಳ ತನ್ನ ಕಾಲದಲ್ಲಿ ಈ ಭಾಗವನ್ನು ನೋಡಿಕೊಳ್ಳಲು ದಕ್ಷರಾದ ದಂಡನಾಯಕರನ್ನು ನೇಮಿಸಿದ್ದ. ಮುಂದೆ ಹೊಯ್ಸಳರಿಗೂ ಸೇವುಣರಿಗೂ ಆದ ತಿಕ್ಕಾಟದಿಂದ, ಹೊಯ್ಸಳರು ಈ ಭಾಗವನ್ನೆಲ್ಲ ಗೆದ್ದ ಮೇಲೆ, ಇದರ ಪ್ರಾಮುಖ್ಯ ಕಡಿಮೆಯಾಗಿ ಇಲ್ಲಿಯ ಪ್ರತಿಭೆ ಹೊಯ್ಸಳರ ರಾಜಧಾನಿಗಳಾದ ಬೇಲೂರು, ದೋರಸಮುದ್ರಗಳ ಕಡೆ ಹರಿಯಿತು. ವಿಷ್ಣುವರ್ಧನನ ರಾಣಿ ಶಾಂತಲೆ ಇಲ್ಲಿಯ ಧರ್ಮೇಶ್ವರ ದೇವರ ಪ್ರಸಾದದಿಂದ ಹುಟ್ಟಿದವಳೆನ್ನುವರು, ಪ್ರಸಿದ್ಧ ಹೊಯ್ಸಳರ ಶಿಲ್ಪಿಗಳಾದ ದಾಸೋಜ, ಅವನ ಮಗ ಚಾವಣ ಬಳ್ಳಿಗಾವೆಯವರು. ಬಳ್ಳಿಗಾವೆಯ ದೇವಾಲಯಗಳ ಹಲವು ಶಿಲ್ಪಗಳಲ್ಲಿ ದಾಸೋಜನ ಕೈವಾಡವಿದ್ದಿರಬೇಕು. ಒಂದು ದೊಡ್ಡ ಶಾಸನವನ್ನಂತೂ ಇವನು ಕಂಡರಿಸಿದ್ದಾನೆ.

ಬಳ್ಳಿಗಾವೆ ಈಗ ಸಾಮಾನ್ಯವಾದ ಒಂದು ಗ್ರಾಮ. ಇಲ್ಲಿಯ ಶಾಸನಗಳಲ್ಲಿ ತಿಳಿಸಿರುವ ನಂದಿಕೇಶ್ವರ, ಕುಸುಮೇಶ್ವರ, ಗವರೇಶ್ವರ, ಜಗದೇಕ ಮಲ್ಲೇಶ್ವರ, ತ್ರಿಲೋಕೇಶ್ವರ, ಜೋಗೇಶ್ವರ, ವೀರಕೇಶವ, ನರಸಿಂಹ, ಅಷ್ಟೋಪವಾಸಿ ಭಟಾರರ ಬಸದಿ, ಗೊಳಪಯ್ಯನ ಬಸದಿ, ಜಯಂತಿ ಪ್ರಭಾ ಬೌದ್ಧವಿಹಾರ ಮೊದಲಾದುವು ಬರಿಯ ಹೆಸರಿನಲ್ಲಿ ಮಾತ್ರ ಉಳಿದಿವೆ. ಈಗಿರುವ ಮನೆಗಳನೇಕವುಗಳ ಹಿತ್ತಿಲು ಹಳೆಯ ದೇವಾಲಯಗಳಿದ್ದ ತಾಣ. ಈ ಮನೆಗಳಿಗೆ ಉಪಯೋಗಿಸಿರುವ ಕಲ್ಲುಗಳು ದೇವಾಲಯಗಳ ಗೋಡೆಗಳ ಕಲ್ಲುಗಳು. ಹೀಗಾಗಿ ಇಲ್ಲಿ ಹಿಂದೆ ನಿರ್ಮಿತವಾಗಿದ್ದ ಸುಂದರವಾದ ದೇವಾಲಯಗಳು, ಬಸದಿಗಳು, ವಿಹಾರಗಳು, ಮಠಗಳು, ಉಳಿದಿರುವುದಕ್ಕಿಂತಲೂ ಅಳಿದಿರುವುದೇ ಹೆಚ್ಚು. ಇಷ್ಟಾದರೂ ಇಲ್ಲಿ ಉಳಿದಿರುವ ದೇವಾಲಯಗಳು, ಶಿಲ್ಪಗಳು ಆಗಿನ ವಾಸ್ತುವಿನ, ಶಿಲ್ಪದ ಶ್ರೇಷ್ಠತೆಯ ಸೊಗಸನ್ನು ಮನವರಿಕೆ ಮಾಡಿಕೊಡುತ್ತವೆ. 1070ರಲ್ಲಿ ನಿರ್ಮಿಸಲಾದ ತ್ರಿಪುರಾಂತಕ ದೇವಾಲಯ ಕಲೆಯ ಸುಂದರವಾದುದು. ಎರಡು ಗರ್ಭಗುಡಿಗಳಿರುವ ಈ ದೇವಾಲಯದ ಗೋಡೆಗಳು ಬಿದ್ದು ಹೋಗಿದ್ದವು. ಅವನ್ನು ಈಚೆಗೆ ಪುನರ್ನಿಮಿಸಲಾಗಿದೆ. ದೇವಾಲಯಗಳ ಹೊರಗೋಡೆಯ ಅಧಿಷ್ಠಾನ ಪಟ್ಟಿಕೆಗಳ ಮೇಲೆ ಕಂಡರಿಸಿದ್ದ ಶಿಲ್ಪಸಾಲುಗಳ ತುಂಡುಗಳನ್ನು ಗೋಡೆಗೆ ಸೇರಿಸಿರುವುದನ್ನು ನೋಡಬಹುದು. ಅದರಲ್ಲಿಯೂ ಪಂಚತಂತ್ರದ ಕಥೆಗಳನ್ನು ನಿರೂಪಿಸುವ ಆಮೆ ಮತ್ತು ಹಂಸಗಳು, ಟಗರು ಕಾಳಗ ಮತ್ತು ನರಿ, ಮೊಸಳೆ ಕೋತಿ ಮುಂತಾದವು ತುಂಬ ಸೊಗಸಾದ ಶಿಲ್ಪಪಟ್ಟಿಕೆಗಳು. ಒಂದರಲ್ಲಿ ಶಿವಲಿಂಗ, ಇನ್ನೊಂದರಲ್ಲಿ ಕೇಶವನ ಮೂರ್ತಿಗಳುಳ್ಳ ಗರ್ಭಗುಡಿಗಳ ಮುಂದಿನ ಬಾಗಿಲುವಾಡಗಳೂ ಅವುಗಳ ಪಕ್ಕದಲ್ಲಿರುವ ಜಾಲಂಧ್ರಗಳೂ ಅತಿಸೂಕ್ಷ್ಮವಾಗಿಯೂ ಸುಂದರವಾಗಿಯೂ ಕಂಡರಿಸಲ್ಪಟ್ಟಿದೆ. ಅದರಲ್ಲಿಯೂ ಅಪರೂಪವಾದ ರೀತಿಯಲ್ಲಿ ಹೆಣೆದಿರುವ ನಾಗನಾಗಿಣಿಯರ ನಾಗಬಂಧವನ್ನುಳ ಇಲ್ಲಿಯ ಜಾಲಂಧ್ರದಂಥದು ಕರ್ನಾಟಕದಲ್ಲಿಯೇ ಮತ್ತೊಂದಿಲ್ಲ ಎನ್ನುವಷ್ಟು ಚೆಲುವಾಗಿದೆ. ಈ ನಾಗಬಂಧದ ಬಾಗಿಲುವಾಡಗಳ ಮೇಲೆ ಗಜಾಸುರ ಮರ್ದನನಾಗಿ ನರ್ತಿಸುತ್ತಿರುವ ಶಿವ, ಒಂದು ಕಡೆ ಬ್ರಹ್ಮ, ಕುಮಾರ ಮತ್ತು ಗಣೇಶ, ಇನ್ನೊಂದು ಕಡೆ ಕೇಶವ ಮತ್ತು ಗರುಡ ಸುತ್ತಲೂ ಪರಿವಾರದೇವತೆಗಳು ಅಷ್ಟದಿಕ್ಪಾಲಕರುಗಳಿಂದ ತುಂಬು ಸೂಕ್ಷ್ಮವಾದ ಕೆತ್ತನೆ, ನಾದಕಲೆಯಿಂದ ಕೂಡಿ ಚಾಳುಕ್ಯಶಿಲ್ಪದ ಸೊಗಸನ್ನು ಶಿಲ್ಪಿಯ ನಿಪುಣತೆಯನ್ನು ಎತ್ತಿಹಿಡಿದಿದೆ.

ಪಂಚಲಿಂಗ ದೇವಾಲಯ ಉಳಿದ ದೇವಾಲಯಗಳಿಗಿಂತ ಎತ್ತರವಾದುದು. ಈಗ ಇದರ ಗರ್ಭಗೃಹ, ಸುಕನಾಸಿಗಳು ಮಾತ್ರ ಉಳಿದಿದ್ದು ಮುಂದಿನ ಕಟ್ಟಡವನ್ನು ಪುನನಿರ್ಮಿಸಲಾಗಿದೆ. ಗರ್ಭಗೃಹದ ಬಾಗಿಲು ಎತ್ತರವಾಗಿದ್ದು ಇಲ್ಲಿದ್ದ ಬೃಹತ್ಪ್ರಮಾಣದ ಭವ್ಯವಾದ ದ್ವಾರಪಾಲಕರ ಮೂರ್ತಿಗಳನ್ನು ಬೆಂಗಳೂರು ವಸ್ತುಸಂಗ್ರಹಾಲಯದಲ್ಲಿ ನೋಡಬಹುದು. ಹೊರಗೆ ವೈಕುಂಠ ನಾರಾಯಣ, ಕುಮಾರ, ಮಹಿಷಾಸುರಮರ್ದಿನಿ, ಶಿವಪಾರ್ವತಿಯರ ಸುಂದರವಾದ ಮೂರ್ತಿಗಳಿದ್ದು ಇಲ್ಲಿದ್ದ ಅತಿಸುಂದರವಾದ ಉಮಾಮಹೇಶ್ವರ ಮೂರ್ತಿಯನ್ನು ಶಿವಮೊಗ್ಗದ ವಸ್ತುಸಂಗ್ರಹಾಲಯದಲ್ಲಿ ಈಚೆಗೆ ಪ್ರದರ್ಶಿಸಲಾಗಿದೆ. ಇವಲ್ಲದೆ ಚಿಕ್ಕದಾದ ಸೋಮೇಶ್ವರ ದೇವಾಲಯ, ಸುಂದರವಾದ ಬಾಗಿಲುವಾಡವಿರುವ ಕಲ್ಲೇಶ್ವರ ದೇವಾಲಯ, ಶೇಷಶಾಯಿ ರಂಗನಾಥನ ಮೂರ್ತಿಯಿರುವ ಅನಂತಶಯನ ಗುಡಿ ಮುಂತಾದುವು ಜೀರ್ಣಾವಸ್ಥೆಯಲ್ಲಿವೆ. ಚತುರ್ಮುಖ ಬ್ರಹ್ಮೇಶ್ವರ ತ್ರಿಮೂರ್ತಿ ನರಸಿಂಹ, ತಾರಾಭಗವತಿ ಜಿನ ಮುಂತಾದ ಹಲವಾರು ಮೂರ್ತಿಗಳು ತಮ್ಮ ದೇವಾಲಯಗಳನ್ನು ಕಳೆದುಕೊಂಡು ಬಯಲಿನಲ್ಲಿ ನಿಂತಿವೆ. ಚಾವುಂಡರಾಯ ನಿಲ್ಲಿಸಿದ ಭೇರುಂಡ ಸ್ತಂಭ ತನ್ನ ಮೂಲ ಗಂಡಭೇರುಂಡ ಮೂರ್ತಿಯನ್ನು ಕಳೆದುಕೊಂದು ನಿಂತಿದೆ. ಈಗ ಇದರ ಮುಂದೆ ನಿಂತಿರುವ ಗಂಡಭೇರುಂಡನ ಮೂರ್ತಿ ಆಧುನಿಕ ಶಿಲ್ಪಿಯ ಕೃತಿ.

ಇಲ್ಲಿಯ ಕೇದಾರೇಶ್ವರ ದೇವಾಲಯವೊಂದು ಪೂರ್ಣವಾಗಿ ಉಳಿದುಬಂದಿರುವ ದೇವಾಲಯವೆನ್ನಬಹುದು. ಹನ್ನೊಂದನೆಯ ಶತಮಾನದಲ್ಲಿಯೇ ಕಟ್ಟಿರಬಹುದಾದ ಈ ದೇವಾಲಯ ತ್ರಿಕೂಟಾಚಲವಾಗಿದ್ದು ಜಗತಿಯ ಮೇಲೆ ನಿರ್ಮಿತವಾಗಿದೆ. ಮೂರು ಗರ್ಭಗುಡಿಗಳ ಮೇಲೂ ಮೂರು ಗೋಪುರಗಳಿದ್ದು ದೇವಾಲಯದ ಮುಂದೆ ಭವ್ಯವಾದ ಮಂಟಪವಿದೆ. ಚಾಳುಕ್ಯ ರೀತಿಯಲ್ಲಿ ನಿರ್ಮಿತವಾಗಿರುವ ಈ ದೇವಾಲಯ ಪ್ರಾಚೀನವಾದ ತ್ರಿಕೂಟಾಚಲ.

ಕೇದಾರೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಅದರ ಒಂದು ಭಾಗವಾಗಿ ಕೋಡಿಯಮಠ ಎಂಬ ಕಾಳಾಮುಖ ಶೈವರ ಮಠ ಇತ್ತು. 10-13ನೆಯ ಶತಮಾನಗಳಲ್ಲಿ ಇದು ಬಹು ಪ್ರಖ್ಯಾತಿ ಗಳಿಸಿತ್ತು. ಇದರಲ್ಲಿ ಅನೇಕ ತಪಸ್ವಿಗಳೂ ವಿದ್ವಾಂಸರೂ ರಾಜಪೂಜಿತರೂ ಆದ ಪ್ರಭಾವಶಾಲಿ ವ್ಯಕ್ತಿಗಳಿದ್ದರು. ಈ ಮಠದ ಅಧಿಪತಿಗಳು ಮೂವರಕೋಣೆಯ ಸಂತತಿಯ ಪರ್ವತಾವಳಿಯ ಶಕ್ತಿಪರ್ಷೆಗೆ ಸೇರಿದ್ದರು. ಇವರಲ್ಲಿ ಈಗ ತಿಳಿದಮಟ್ಟಿಗೆ ಮೊದಲಿಗನೆಂದರೆ ಕೇದಾರಶಕ್ತಿ (ಸು.1073). ಇವನ ಶಿಷ್ಯ ಶ್ರೀಕಂಠ 1(ಸು.1100). ಮುಂದೆ ವಿದ್ಯಾಭರಣ ನೆಂಬುವವನು (1128). ಮಠದ ಆಡಳಿತದ ಹೊಣೆಯು ತನ್ನ ವಿದ್ಯಾವ್ಯಾಸಂಗಕ್ಕೆ ಅಡ್ಡಿ ಬರುತ್ತದೆ ಎಂಬ ಕಾರಣದಿಂದಾಗಿ ಆ ಹೊಣೆಯನ್ನು ತನ್ನ ಒಂದನೆಯ ಶಿಷ್ಯ ವಾಮಶಕ್ತಿಗೆ ವಹಿಸಿಕೊಟ್ಟ. ಇದೇ ಪರಂಪರೆಯಲ್ಲಿ ಮುಂದೆ ಬಂದ ಎರಡನೆಯ ವಾಮಶಕ್ತಿ (1162) ಇವರಲ್ಲೆಲ್ಲ ಅತ್ಯಂತ ಪ್ರಖ್ಯಾತವಾಗಿದ್ದ. ಇವನ ವಿದ್ವತ್ತು ತಪಸ್ಸು, ಪ್ರಭಾವಗಳನ್ನು ಶಾಸನಗಳು ಕೊಂಡಾಡಿವೆ. ಕೋಡಿಯಮಠ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಗಳಿಸಿದ್ದ ಖ್ಯಾತಿಯನ್ನು ಅನೇಕ ಶಾಸನಗಳು ಸವಿಸ್ತಾರವಾಗಿ ಬಣ್ಣಿಸಿವೆ.
(ಎಚ್.ಆರ್.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ